Ayurvediccommunity.com©
 

ಕಾಲ ದೇಶ ಆಯುರ್ವೇದ ಮತ್ತು ಹಬ್ಬ

ಹುಯ್ಯೋ...... ಹುಯ್ಯೋ ಮಳೆರಾಯ-- ಮಳೆಗಾಲ (5)

ಜುಲೈ೨೨ - ಸಪ್ಟಂಬರ್ ೨೨ , ಸೌರಮಾನ ಮಾಸ - ಕರ್ಕಾಟಕ, ಸಿಂಹ, ಚಾಂದ್ರಮಾನ ಮಾಸ - ಆಷಾಢ, ಶ್ರಾವಣ, ಬಾದ್ರಪದ
ಋತು ಲಕ್ಷಣ-ಬಿಸಿಲು ಕಾಲದ ನಂತರ(ದಕ್ಷಿಣ ಪೂರ್ವ ಏಶಿಯಾದಲ್ಲಿ ಮಾತ್ರ) ಮಳೆ ಬಂದೊಡನೆ ವಾತಾವರಣ ಉಷ್ಣಾಂಶ ಇಳಿಯುತ್ತದೆ. ಮಳೆ ಸ್ವಲ್ಪವಾಗಿ ಬಂದರೆ ಬಿಸಿ ಕಾವಲಿಗೆಗೆ ನೀರು ಹಾಕಿದರೆ ಹಬೆ ಬರುವಂತೆ ಬಿಸಿ ಇನ್ನಷ್ಟು ಹೆಚ್ಚಾಗುತ್ತದೆ. ಬೇಸಗೆಯಲ್ಲಿ ಒಣ ಸೆಕೆಯಾದರೆ ಈಗ ತೇವಾಂಶದಿಂದ ಕೂಡಿದ ಸೆಕೆ ಪ್ರಾರಂಭವಾಗುತ್ತದೆ.
ಜೋರಾಗಿಮಳೆ ಬಂದು ನೆಲದಲ್ಲಿ, ನೀರಿನಲ್ಲಿ ಕೆಸರಾದರೆ ಮಾತ್ರ ಮಳೆಗಾಲದ ಸರಿಯಾದ ಪರಿಣಾಮ ತಿಳಿಯುತ್ತದೆ. ದುರದೃಷ್ಟವಶಾತ್ ಪ್ರಕೃತಿ ನಾಶದಿಂದಾಗಿ ಮಳೆ ಬರುವುದು ವ್ಯತ್ಯಾಸವಾಗಿ ಅನಾನುಕೂಲತೆಗಳು ಜಾಸ್ತಿ ಆಗಿವೆ. ನೆಲಕ್ಕೆ ಹಾಕಿದ ಸಿಮಂಟು ಟಾರಿನಿಂದ ಅಂತರ್ಜಲ ಪ್ರಮಾಣ ಕಡಿಮೆ ಆಗಿದೆ; ಅದನ್ನು ನೀರನ್ನು ಇಂಗಿಸುವಿಕೆಯ ಮೂಲಕ ಸರಿ ಮಾಡಿದರೂ, ನೀರು ಸೇರಲು ಬೇಕಾದ ಭೂಮಿಯ ಅಂಶ ಕಡಿಮೆ ಆಗಿದೆ. ಆದ್ದರಿಂದ ಉಷ್ಣಾಂಶ ಹೆಚ್ಚಾಗಿದೆ. ಈ ರೀತಿ ವಾತಾವರಣ ಇರುವ ನಗರಗಳಲ್ಲಿ ಮಳೆಗಾಲದ ದಿನಚರಿಯಿಂದ ಅನಾನುಕೂಲವೇ ಜಾಸ್ತಿ. ಅಲ್ಲಿ ತೇವಾಂಶದಿಂದ ಕೂಡಿದ ಬೇಸಗೆಯಲ್ಲಿ ಮಾಡ ಬೇಕಾದ ದಿನಚರ್ಯೆಯನ್ನೇ ಅನುಸರಿಸ ಬೇಕು. ಇಲ್ಲವಾದಲ್ಲಿ ಕೆಮ್ಮು ದಮ್ಮು ಜ್ವರ ಇತ್ಯಾದಿಗಳು ಬರುವ ಸಾಧ್ಯತೆ ಇರುತ್ತದೆ.

ಹಾಗಾದರೆ ಮಳೆ ಬಂದು ಮಳೆಗಾಲದ ಲಕ್ಷಣಗಳಿರುವಲ್ಲಿ ಏನು ಮಾಡ ಬೇಕು?
ದೇಹದ ಮೇಲೆ ಪ್ರಭಾವ- ಈ ಕಾಲದಲ್ಲಿ ಬೇಸಗೆಯ ಒಣಹವೆಯಿಂದಾಗಿ ದೇಹದ ಮೇಲಾದ ವಾತದ ಪ್ರಭಾವವು, ಮಳೆಗಾಲದ ಪ್ರಾರಂಭದ ಹಬೆ, ಧೂಳಿನಿಂದ ಕೂಡಿದ ಗಾಳಿಯಿಂದಾಗಿ ಇನ್ನಷ್ಟು ತೊಂದರೆ ಕೊಡಲು ಪ್ರಾರಂಬಿಸುತ್ತದೆ. ಬೇಸಗೆಯಲ್ಲಿ ಒಣಗಿದ ಕಫ ಮತ್ತು ಪಿತ್ತಗಳು, ಮಳೆಗಾಲದ ತೇವಾಂಶದಿಂದಾಗಿ, ಧಾತುಗಳಿಂದ(tissues) ಹೊರಬರಲು ಪ್ರಾರಂಭಿಸುತ್ತವೆ. ಆದ್ದರಿಂದ ಈ ಕಾಲದಲ್ಲಿ ಜೀರ್ಣಶಕ್ತಿಯು ಸ್ವಲ್ಪ ನೀರು ಹಾಕಿದ ಕೆಂಡದಂತೆ ಪೂರ್ತಿಯಾಗಿ ಬದಲಾವಣೆಯಾಗುತ್ತದೆ. ಇದರಿಂದಾಗಿ ತಿಂದ ಆಹಾರದ ಪರಿವರ್ತನೆಯಲ್ಲಿ ವ್ಯತ್ಯಾಸ ಉಂಟಾಗಿ ರಸ, ರಕ್ತ, ಮಾಂಸ, ಮೇದಸ್ಸು, ಎಲುಬು, ನರಮಂಡಲ, ಮತ್ತು ಶುಕ್ರ ಮುಂತಾದ ಅಂಗಾಂಶಗಳ ಉತ್ಪತ್ತಿಯಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ರಕ್ತದ ಉತ್ಪತ್ತಿ, ಪರಿಚಲನೆಯ ಕ್ರಮಗಳು ವ್ಯತ್ಯಾಸವಾಗಿ, ಮೊಳೆರೋಗ, ಹೃದ್ರೋಗ, ಪಕ್ಷಾಘಾತ, ರಕ್ತದೋತ್ತಡ, ಮಧುಮೇಹ ಇತ್ಯಾದಿ ಅನೇಕ ರೋಗಗಳು ಪ್ರಾರಂಭವಾಗ ಬಹುದು ಅಥವಾ ಜಾಸ್ತಿಯಾಗ ಬಹುದು.
add chart here
ಋತು ಚರ್ಯೆವಿವರಣೆ - ನೆನಪಿಡಿ ಜಾಸ್ತಿ ಮಳೆಬಂದು ಕೊಚ್ಚೆ ಜಾಸ್ತಿ ಇರುವ ಮಳೆಗಾಲದಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು ಮಳೆಗಾಲದಲ್ಲೇ ಉಪಯೋಗಿಸ ಬಾರದು; ಸೊಪ್ಪು ಹಣ್ಣುಗಳನ್ನು ಉಪಯೋಗಿಸಲೇ ಬಾರದು, ಅವುಗಳನ್ನು ಒಣಗಿಸಿ ನಂತರ ಉಪಯೋಗಿಸ ಬೇಕು ಅಥವಾ ಒಣಗಿದವುಗಳನ್ನು ನೆನೆಸಿ ಮೊಳಕೆ ಬರಿಸದೆ ಉಪಯೋಗಿಸ ಬಹುದು. ಹಸಿಯಾದ ಸೊಪ್ಪು ಮುಂತಾದವನ್ನು ತಿಂದರೆ ಬೇಧಿಮುಂತಾದ ರೋಗಗಳು ಉತ್ಪತ್ತಿಯಾಗುತ್ತವೆ.

      ಈ ಕಾಲದ ಪ್ರಾರಂಭದಲ್ಲಿ ಸ್ವಲ್ಪ ಹುಳಿ ಇರುವ ತುಪ್ಪದ ಒಗ್ಗರಣೆ ಹಾಕಿದ ಉಪ್ಪಿಟ್ಟು, ಅವಲಕ್ಕಿ, ರವೆ ಇಡ್ಲಿ, ಉದ್ದಿನ ವಡೆ, ಚಿತ್ರಾನ್ನ, ಪುಳಿಯೋಗರೆ ಇತ್ಯಾದಿ ನೀರಿನಂಶ ಕಡಿಮೆ ಇರುವ ಆಹಾರಗಳನ್ನು ಉಪಯಾಗಿಸಬೇಕು. ಅಲ್ಲದೆ ಎಲ್ಲಾ ರಸಗಳೂ ಇರುವ ಆಹಾರಗಳನ್ನು ಉಪಯೋಗಿಸ ಬೇಕು.

  ಪ್ರಧಾನವಾಗಿ ಬೇಸಗೆಯಲ್ಲಿ ಬೆಳೆದು ಶೇಖರಿಸಿದ ತರಕಾರಿಗಳು ಅಂದರೆ ಬೇಸಗೆಯಲ್ಲಿ ಬೆಳೆದ ಸೌತೆ, ಕುಂಬಳಕಾಯಿ, ಪುನರ್ಪುಳಿ, ಹೆಸರು ಬೇಳೆ, ತೊಗರಿ, ಒಣಕಾಳುಗಳು, ಹಲಸಿನ ಬೀಜ, ಹಳೆ ಅಕ್ಕಿ, ಹಳೆ ರಾಗಿ ಗೋಧಿ ಶ್ರಮ ಜೀವಿಗಳಿಗೆ ಹುರುಳಿಕಾಳು ಆಹಾರಗಳನ್ನು ಬೇಯಿಸಿ ಉಪಯೋಗಿಸ ಬೇಕು. (ಕೋಲ್ಡ್ ಸ್ಟೋರೇಜ್ ನಲ್ಲಿ ಶೇಖರಿಸಿದ್ದಲ್ಲ). ನಂತರದ ದಿನಗಳಲ್ಲಿ ಮಳೆಗಾಲದ ಅರ್ಧದಿಂದ ನಂತರ ಪಡವಲ, ಮೆಂತ್ಯ ಕಾಳು, ಹೀರೆಕಾಯಿ, ಒಣ ಮೂಲಂಗಿ, ಒಣಮಾವಿನಕಾಯಿ ಈ ರೀತಿಯಾದ ನೀರಿನಂಶ ಕಡಿಮೆ ಇರುವ ಅಥವಾ ಸ್ಪಲ್ಪ ಕಹಿ ರುಚಿಯ ತರಕಾರಿ ಆಹಾರಗಳನ್ನೇ ಉಪಯೋಗಿಸ ಬೇಕು. ಈ ಕಾಲದಲ್ಲಿ ದೇಹದಲ್ಲಿ ಬಲ ಕಡಿಮೆ ಇರುವ ಕಾರಣ ಮೈಥುನ ತ್ಯಾಜ್ಯ, ಬಲ ಇದ್ದು ಮೈಥುನವಾಚರಿಸಿ ಗರ್ಭಧಾರಣೆ ಆದರೂ ಹುಟ್ಟುವ ಮಕ್ಕಳಿಗೆ ಆನುವಂಶಿಕ ರೋಗಗಳು ಬರುವ, ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕಡಿಮೆಯಾಗುವ ಅಥವಾ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಜೀರಿಗೆ , ಮೆಣಸು ಉಪಯೋಗಿಸ ಬಹುದು, ಬಿಸಿ ನೀರನ್ನೇ ಕುಡಿಯಬೇಕು.(ಅರ್ದ ಬಿಸಿ ಮಾಡಿದ ನೀರಲ್ಲ, ಕುದಿಸಿ ಆರುತ್ತಾ ಇರುವ ನೀರು.) ಇದಕ್ಕೆ ಶುಂಠಿ, ಶ್ರೀಗಂಧ, ಕರ್ಪೂರ, ಜೇನು, ಕೇಸರಿ ಇತ್ಯಾದಿಗಳನ್ನು ಅಲ್ಪ ಪ್ರಮಾಣದಲ್ಲಿ ಸೇರಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಅದೇ ರೀತಿ ಸರಿಯಾಗಿ ತಯಾರಿಸಿದ ದ್ರಾಕ್ಷಾಸವ ಸೇವನೆಯೂ ಹಿತಕರವೇ. ಮಾಂಸಾಹಾರಿಗಳು ಬೆಳ್ಳುಳ್ಳಿ ಹುರಿದು ಉಪಯೋಗಿಸ ಬಹುದು, ಮಾಂಸಗಳಲ್ಲಿ ಕೇವಲ ಆಡಿನ ಮಾಂಸ ತಿನ್ನ ಬಹುದು.
ಅಪಥ್ಯ- ನೀರಿನಲ್ಲಿ ವಾಸಿಸುವ ಪ್ರಾಣಿಗಳ ಮಾಂಸ ಸಂಪೂರ್ಣ ವರ್ಜ. ಬೇಯಿಸದ ತರಕಾರಿಗಳು, ಹಸಿರು ಮೆಣಸಿನಕಾಯಿ, ಟೊಮಾಟೊ, ಮೊಸರು, ಕರಿದ ಪದಾರ್ಥ, ಶಾಖಾಹಾರಿಗಳಿಗೆ ಕೋಸು, ಮಸಾಲೆ ಹೆಚ್ಚಾಗಿರುವ ಆಹಾರ, ಉತ್ತರ ಭಾರತದ ತಿಂಡಿಗಳು. ಬೇಸಗೆಯಲ್ಲಿ ಬಲಹೀನವಾಗಿದ್ದ ಕ್ರಿಮಿಗಳಿಗೆ ಮಳೆಗಾಲದ ರಾಡಿಯಿಂದಾಗಿ ಬಲ ಬಂದು ಖಾಯಿಲೆಗೆ ಕಾರಣವಾಗುತ್ತವೆ, ನಗರವಾಸಿಗಳು ಮಳೆಯಲ್ಲಿ ನೆನೆಯಬಾರದು, ಅಕಸ್ಮಾತ್ ನೆನೆದಲ್ಲಿ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಿದಲ್ಲಿ ನೆಗಡಿ ಇತ್ಯಾದಿಗಳನ್ನು ತಡೆಯ ಬಹುದು. ಹಗಲು ನಿದ್ದೆ ಸರ್ವಥಾ ನಿಷಿದ್ಧ.
ಮಳೆಗಾಲದ ಹಬ್ಬಗಳು- ಶಾಕವ್ರತ, ಮೊದಲ ಆಷಾಡವಾದರೆ ತವರು ಮನೆಯಾತ್ರೆ, ಪಿತೃಪಕ್ಷ ಇತ್ಯಾದಿಗಳು
ಹಬ್ಬ ಮತ್ತು ಪಥ್ಯ-- ಆಯುರ್ವೇದದ ನಿಯಮದ ಪರಿಪೂರ್ಣ ಪರಿಪಾಲನೆ ಶಾಕ ವ್ರತ. ಆಯುರ್ವೇದದ ನಿಯಮದಂತೆ ಹಸಿ ಶಾಕಗಳು ಮುಖ್ಯವಾಗಿ ಮಾವು ಬಿಟ್ಟು ಉಳಿದ ಹಣ್ಣು, ಸೊಪ್ಪು ಆಗ ತಾನೇ ಬೆಳೆದ ತರಕಾರಿಗಳು, ಹಸಿ ಕಾಳು ನಿಷಿದ್ಧ. ಗಡ್ಡೆಗಳು, ಬೇಳೆ ಆಗ ಬೆಳೆಯದ ಕಾರಣ ಹಿಂದಿನ ಋತುವಿನದ್ದೇ ಸಿಗುವ ಕಾರಣ ಅವುಗಳನ್ನು ತಿನ್ನ ಬಹುದು. ಅದೇ ರೀತಿ ಜೀರ್ಣ ಶಕ್ತಿ ಕುಂಠಿತವಾಗದಂತೆ ಜೀರಿಗೆ, ಧನಿಯ, ಮೆಣಸುಗಳನ್ನು ಸೇರಿಸಿದ ಅಡಿಗೆ ಸೇವನೆಗೆ ಯೋಗ್ಯ. ಹಾಗಾಗಿ ಎಲ್ಲರೂ ಬಾಯಿ ಚಪಲ ಬಿಟ್ಟು ಈ ವ್ರತ ಮಾಡಿದಲ್ಲಿ ಆರೋಗ್ಯ ಹಾಳಾಗುವುದಿಲ್ಲ. ಅದೇ ರೀತಿ ಮೊದಲ ಆಷಾಡ - ಈ ಕಾಲದಲ್ಲಿ ಮನುಷ್ಯನಿಗೆ ಬಲ ಕಡಿಮೆ, ಆದ್ದರಿಂದ ಈ ಕಾಲದಲ್ಲಿ ಗರ್ಭಧಾರಣೆಯಾದರೆ ಮಕ್ಕಳಿಗೆ ಆನುವಂಶಿಕ ವ್ಯಾಧಿ ಬರುವ ಸಾಧ್ಯತೆ ಜಾಸ್ತಿ. ಇದನ್ನು ನಿವಾರಿಸಲು ಮೊದಲ ಆಷಾಡದಲ್ಲಿ ಪತಿ ಪತ್ನಿಯರನ್ನು ದೂರ ಇರಿಸಲು ಮಾಡಿದ ವಿಧಾನವೇ ತವರು ಮನೆ ಯಾತ್ರೆ. ನಂತರದ ಪಿತೃಪಕ್ಷ ಅಥವಾ ಮಹಾಲಯ ಅಮಾವಾಸ್ಯೆಯಂದು,ಆಷಾಢದಲ್ಲಿ ಕೆಳೆದುಕೊಂಡ ಬಲವನ್ನು ಪುನಃ ಪಡೆಯಲು ಅತೀ ಬಲದಾಯಕವಾದ ಉದ್ದಿನ ವಡೆ, ಎಳ್ಳು, ಪಾಯಸ ಸೇವನೆ ಹೇಳಿದ್ದಾರೆ. ಈಗ ಹೇಳಿ ಇದು ಹಬ್ಬವೇ? ಆರೋಗ್ಯ ಸೂತ್ರವೇ? ಇವುಗಳನ್ನು ಒಂದು ದಿನವಾದರೂ ಸೇವಿಸಿದರೆ ಕೈಕಾಲು, ಗಂಟು ನೋವುಗಳು ಬರುವುದು ಕಡಿಮೆಯಾಗುತ್ತದೆ.

ಹಬ್ಬಗಳ ಶರದೃತು-

ಸೆಪ್ಟೆಂಬರ್ ೨೨ ರಿಂದ ನವೆಂಬರ್ ೨೨, ಸೌರಮಾನ ಮಾಸ -ಕನ್ಯಾ, ತುಲಾ, ಚಾಂದ್ರಮಾನ ಮಾಸ - ಆಶ್ವಯುಜ, ಕಾರ್ತೀಕ , ಉಷ್ಣಾಂಶ -೨೨ (22) ರಿಂದ ೨೫(25) ಡಿಗ್ರಿ ಸೆಲೆಷಿಯಸ್
ಋತು ಲಕ್ಷಣ-ಮಳೆಗಾಲದ ನಂತರ ಮಳೆ ಇಲ್ಲದೆ, ಮುಗಿಲಿಲ್ಲದ ಆಕಾಶ, ಎಳೇ ಬಿಸಿಲು, ತಿಳಿಯಾದ ನೀರಿರುವ, ಗಿಡಗಳು ಎರಡನೆಯ ಬಾರಿಗೆ ಚಿಗರುವ ಕಾಲವೇ ಶರದೃತು.
ದೇಹದಲ್ಲಿ ಬದಲಾವಣೆ-ಮರಗಳು, ಮನುಷ್ಯರು, ಮಳೆಗಾಲದ ನೀರಿನ ಧಾಳಿಯಿಂದ, ಬೇಸಾಯದ ಶ್ರಮದಿಂದ ಸುಧಾರಿಸಿ ಕೊಳ್ಳುವ ಕಾಲ. ಹೊಸಬೆಳೆ, ಹೊಸ ನೀರು ಇತ್ಯಾದಿಗಳಿಂದ ಹರ್ಷಗೊಂಡಿದ್ದ ಮನಸ್ಸು, ಮೈ, ಆನಂದ ಪಡಲು ಹಬ್ಬಗಳ ಸಾಲು -ನಾಗರ ಪಂಚಮಿ, ಚೌತಿ, ನವರಾತ್ರಿ, ದೀಪಾವಳಿ ಕೊನೆಗೆ ನೆಲ್ಲಿಕಾಯಿಯ ಸೇವನೆಯಲ್ಲಿ ಅಂದರೆ ಉತ್ಥಾನ ದ್ವಾದಶಿಯಲ್ಲಿ ಮುಕ್ತಾಯ. ಇವೆಲ್ಲವೂ ಮಳೆಗಾಲದ ಸ್ಪಭಾವದಿಂದಾಗಿ ಕ್ಷೀಣ ಅಥವಾ ವ್ಯತ್ಯಾಸವಾದ ಪಿತ್ತ ಮತ್ತು ಅಗ್ನಿಶಕ್ತಿಯನ್ನು ಪುನಃ ಸರಿ ಪಡಿಸುವುದಕ್ಕಾಗಿ. ಸಿಹಿಗಳ ಒಟ್ಟಿಗೆ ಕಹಿ, ಒಗರು ರುಚಿಗಳಿಂದ ಕೂಡಿದ ತರಕಾರಿಗಳನ್ನೂ, ತುಪ್ಪದಿಂದ ತಯಾರಿಸಿದ ಆಹಾರಗಳನ್ನೂ ಸೇವಿಸಬೇಕು. ಇದು ಈ ಕಾಲದಿಂದಾಗುವ ಪಿತ್ತ ಪ್ರಕೋಪವನ್ನು ಕಡಿಮೆ ಮಾಡುತ್ತದೆ. ಅಗ್ನಿಯನ್ನು ಹೆಚ್ಚು ಮಾಡುತ್ತದೆ.
ಪಥ್ಯ- ಕೋಕಮ್, ಹಸಿ ನೆಲ್ಲಿಗಳನ್ನು ಉಪಯೋಗಿಸ ಬಹುದು. ಹುಳಿ ರುಚಿ ಇರುವ ಆಹಾರ(ಪುಳಿಯೋಗರೆ ಮುಂತಾದವು). ವಿವಿಧ ರೀತಿಯಲ್ಲಿ ನೆಲ್ಲಿ ಕಾಯಿಯ ಉಪಯೋಗ ಒಳ್ಳೆಯದು(ನೆಲ್ಲಿ ತಂಬುಳಿ, ನೆಲ್ಲಿ ಹಿಂಡಿ, ಮೊರಬ್ಬ, ನೆಲ್ಲಿ ಉಪ್ಪಿನಕಾಯಿ, ನೆಲ್ಲಿ ಚಟ್ಟು (ನೆಲ್ಲಿ ಕಾಯಿಯನ್ನು ರುಬ್ಬಿ ಅದಕ್ಕೆ ಉಪ್ಪು ಜೀರಿಗೆ, ಮೆಂತ್ಯ, ಮೆಣಸು ಸೇರಿಸಿ ಬಿಲ್ಲೆಗಳಂತೆ ಮಾಡಿ ಒಣಗಿಸಿ, ಶೇಖರಿಸುವುದು. ಅಗತ್ಯ ಇದ್ದಾಗ ಮೊಸರು ಸೇರಿಸಿ ಉಪಯೋಗ ಮಾಡುವುದು), ಅದೇ ರೀತಿ ಅಮೃತ ಬಳ್ಳಿ, ಆಡುಸೋಗೆ, ಬೇವಿನ ಹೂವು, ಪಡವಲದ ಎಲೆ, ಮೆಂತ್ಯದ ಎಲೆ, ಅಗಸೆ, ಹುಳಿ ಸೊಪ್ಪು, ಇತ್ಯಾದಿಗಳನ್ನು ಉಪಯೋಗಿಸ ಬೇಕು. ಹಾಗಲಕಾಯನ್ನು ಮಿತವಾಗಿ (ಪಿತ್ತ ವಾತಗಳು ಹೆಚ್ಚಾಗದಷ್ಟುಪ್ರಮಾಣದಲ್ಲಿ) ಉಪಯೋಗಿಸಬೇಕು. ಈ ರೀತಿ ಮಾಡುವುದರಿಂದ ಈ ಕಾಲದ ಖಾಯಿಲೆಗಳಾದ ಸೋರಿಯಾಸಿಸ್, ಚರ್ಮವ್ಯಾಧಿಗಳು, ಕಾಲು ಒಡೆಯುವಿಕೆ ಕಡಿಮೆಯಾಗುತ್ತದೆ. ಚರ್ಮ ನುಣುಪಾಗುತ್ತದೆ. ಹಾಲಿನ ತಿಂಡಿಗಳಾದ ಬಾಸುಂಡಿ, ಖೋವಾ, ಪೇಟಾ, ಪಾಯಸಗಳು, ಬೆಣ್ಣೆ, ಗುಲ್ಕನ್ ಇತ್ಯಾದಿಗಳ ಸೇವನೆ ಹಿತಕರ.
ವಿಹಾರ - ವ್ಯಾಯಾಮ ಒಳ್ಳೆಯದು, ವಾಕಿಂಗ್ ಅಲ್ಲ. ಮೈಗೆ ಶ್ರೀಗಂಧ, ಲಾವಂಚ, ಮಡಿವಾಳ, ತ್ರಿಫಲಾ, ಇತ್ಯಾದಿಗಳ ಮಿಶ್ರಣದಿಂದ ಮಾಡಿದ ಸ್ನಾನ ಚೂರ್ಣದಿಂದ ಸ್ನಾನ ಮಾಡಿದರೆ ಮೊಡವೆ, ಕರಿಮಚ್ಚೆ, ತುರಿಕೆ ಮೊಡಲಾದ ಚರ್ಮದ ಖಾಯಿಲೆಗಳ ಬಾಧೆವುದಿ ಹಗಲು ನಿದ್ದೆ, ಬಿಸಿಲು ಗಾಳಿಗಳಲ್ಲಿ ಓಡಾಟ, ಮಂಜಿನಲ್ಲಿ ಓಡಾಟಗಳು ಒಳ್ಳೆಯದಲ್ಲ
ಅಪಥ್ಯ- ಹುಳಿ ಆಹಾರ, ಉಪ್ಪಿನಕಾಯಿ, ಹಸಿಮೆಣಸಿನಕಾಯಿ ಹಾಕಿ ತಯಾರಿಸಿದ ಪದಾರ್ಥಗಳ ಸೇವನೆ ನಿಷಿದ್ಧ, ಅತಿಯಾಗಿ ಹೊಟ್ಟೆ ತುಂಬುವಂತೆ ಊಟ, ಊಟ ಮಾಡುವಾಗ ಹಸಿ ಎಣ್ಣೆ ಸೇವಿಸಬಾರದು, ಆದರೆ ಜಲಕ್ರೀಡೆಗಳು ಕಾಯಿಸದೆ ಇರುವ ನೀರನ್ನು ಕುಡಿಯುವುದನ್ನು ಮಾಡ ಬಹುದು.
ಈ ಋತುವಿನ ಹಬ್ಬಗಳು- ನಾಗರ ಪಂಚಮಿ, ಚೌತಿ, ನವರಾತ್ರಿ, ದೀಪಾವಳಿ ಕೊನೆಗೆ ನೆಲ್ಲಿಕಾಯಿಯ ಸೇವನೆಯಲ್ಲಿ ಅಂದರೆ ಉತ್ಥಾನ ದ್ವಾದಶಿಯಲ್ಲಿ ಮುಕ್ತಾಯ. ಮಳೆಗಾಲದಲ್ಲಿ ಹೊರ ಪ್ರಪಂಚದಂತೆ ದೇಹದಲ್ಲೂ ದೋಷಗಳು ಅಲ್ಲೋಲಕಲ್ಲೋಲವಾಗಿ ಕೆಲಸ ಮಾಡುತ್ತವೆ. ಆದಕಾರಣ ಶರೀರ, ಮನಸ್ಸಿನ ನೆಮ್ಮದಿಯ ಜೊತೆಗೆ ಆತ್ಮಸಂಸ್ಕಾರಕ್ಕಾಗಿ ಪಿತೃಪಕ್ಷ, ಮಹಾಲಯಗಳಾದ ಮೇಲೆ ಶರೀರ ಸಂಸ್ಕಾರಕ್ಕಾಗಿ ಹಬ್ಬಗಳು. ಶರೀರವನ್ನು ತಂಪುಗೊಳಿಸಲು ಸಿಹಿ ಕಹಿ ಸಹಿತವಾದ ನವರಾತ್ರಿ. ಕೊನೆದಿನ ಮುಂದಿನ ಋತುವಿನಲ್ಲಿ ಸಂಪೂರ್ಣ ನಿಷಿದ್ಧವಾದ (ಬೂದು ಕುಂಬಳಕಾಯಿಯ ಕ್ಷಾರ ಸ್ವಭಾವ ಹೆಚ್ಚಾಗಿ ಮಧು ಮೇಹಕ್ಕೆ ಕಾರಣವಾಗಬಹುದಾದ) ಕುಂಬಳಕಾಯಿಯ ಬಲಿ. ಈ ಕಾಲದಲ್ಲಿ ಕ್ರಿಮಿ ಕೀಟಗಳು ವೃದ್ಧಿಯಾಗುತ್ತವೆ.ಕ್ರಿಮಿ ಕೀಟಗಳ ನಿವೃತ್ತಿಗೆ ಎಲ್ಲರೂ ಸೇರಿ ಕ್ರಿಮಿ ನಾಶಕಗಳಿರುವ ಪಟಾಕಿ, ಕ್ರಿಮಿಗಳು ದೀಪಕ್ಕೆ ಬಿದ್ದು ಸಾಯಲು ಸಹಸ್ರಾರು ದೀಪ ಮಾಲೆ ಹಚ್ಚುವಿಕೆ. (ಆದರೆ ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗಬಾರದು.) ಕೊನೆಗೆ ಈ ಕಾಲದಲ್ಲಿ ಆಗುವ ರಕ್ತ ದುಷ್ಟಿಗೆ ಚಿಕಿತ್ಸೆಯಾಗಿ ನೆಲ್ಲಿ ಸೇವನೆ (ತುಳಸಿ ಹೆಸರು ಹೇಳಿ) ತುಲಸಿಯೂ ಕೃಮಿಜನ್ಯ ರಕ್ತ ದೋಷಹರ. ನೆಲ್ಲಿ ಮರದ ಬುಡದಲ್ಲಿ (ಮರ ಮುರಿದು ಅಲ್ಲ) ಧಾತ್ರೀ ಹವನ ಮಾಡಿ, ನೆಲ್ಲಿಕಾಯಿ ತಿಂದಲ್ಲಿ ನೆಲ್ಲಿಕಾಯಿಯ ಗುಣ ವೃದ್ಧಿಯಾಗಿ ಸ್ವಾಸ್ಥ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿಂದ ಮುಂದೆಯೇ ಆ ವರ್ಷದ ಷಢ್ರಸೋಪೇತವಾದ ನೆಲ್ಲಿ ಸೇವನೆಗೆ ಯೋಗ್ಯ.

    ಈಗ ಹೇಳಿ ಹಬ್ಬಗಳು ಹಬ್ಬಗಳೇ(ಮೂಢ ನಂಬಿಕಗಳೇ?) ಅಥವಾ ಆರೋಗ್ಯ ಸೂತ್ರಗಳೇ? ಆಚಾರವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ನಂಬಿಕೆಯಿಂದ ಅಪನಂಬಿಕೆಯಿಂದಲ್ಲ, ಆಚಾರ ಅತಿಯಾಗಬಾರದು, ಹಿಂಸೆಯಾಗಬಾರದು, ಆಚಾರ ಬಿಟ್ಟು ಸ್ವೇಛ್ಛಾಚಾರಿಗಳಾಗ ಬಾರದು. ಆಚಾರದ ಅರ್ಥ ತಿಳಿದರೆ ಆರೋಗ್ಯ ತಾನಾಗಿಯೇ ಬರುತ್ತದೆ. ಈ ರೀತಿಯಾಗಿ ಆಯಾ ದೇಶದಲ್ಲಿ ಆಯಾ ದೇಶಗಳ ಏಕದಳ, ದ್ವಿದಳ, ಜಿಡ್ಡು, ತರಕಾರಿ, ಗಡ್ಡೆಗೆಣಸು, ಸೊಪ್ಪು, ತರಕಾರಿಗಳನ್ನು ದಿನಚರ್ಯೆ ಸಹಿತ ಋತುಚರ್ಯೆಗನುಗುಣವಾಗಿ ಸೇವಿಸಿದರೆ ಎಂಭತ್ತರಲ್ಲೂ ಹುಮ್ಮಸ್ಸು ಏರುತ್ತದೆ, ಇಲ್ಲವಾದರೆ ಮೂವತ್ತರಲ್ಲೇ ಮುದಿ ವಯಸ್ಸು ಗ್ಯಾರಂಟಿ.
ಋತುಚರ್ಯೆಯ ಸಾಮಾನ್ಯ ನಿಯಮಗಳು


ಪ್ರತಿದಿನ ಷಡ್ರಸಗಳಿಂದ ಕೂಡಿದ ಆಹಾರವೇ ಯೋಗ್ಯವಾದರೂ ಆಯಾ ಋತುವಿನ ರಸ ಜಾಸ್ತಿಯಿರ ಬೇಕು. ಬೇರೆ ಬೇರೆ ದೇಶಗಳವರು ಆಯಾ ದೇಶದ ಋತುಮಾನಗಳ ಲಕ್ಷಣಗಳಿಗನುಗುಣವಾದ ಆಹಾರವನ್ನು ಸೇವಿಸಿದರೆ; ಇಲ್ಲಿನವರು ಇಲ್ಲಿಯ ಋತುಮಾನಗಳಿಗನುಸಾರವಾಗಿ ಆಹಾರ ಸೇವಿಸಿದರೆ ವ್ಯಾಧಿಗಳಿಂದ ದೂರ ಇರಬಹುದು.
ಮಾಂಸಾಹಾರ-ಆಯುರ್ವೇದದಲ್ಲಿ ಮಾಂಸಾಹಾರಿಯಾಗು ಅಥವಾ ಶಾಖಾಹಾರಿಯಾಗು ಎನ್ನುವ ಮಾತಿಲ್ಲ, ದೇಹಕ್ಕೆ ವ್ಯಾಧಿ ಬಾರದಂತೆ ಮಾಡಲು ಹಾಗೂ ಸ್ವಾಸ್ಥ್ಯ ವೃದ್ಧಿ ಮಾಡಲು ಬೇಕಾದ, ಆಹಾರವನ್ನು ಹಿತಮಿತವಾಗಿ, ಕಾಲದಲ್ಲಿ ಸೇವಿಸಿ, ಬಾಯಿಚಪಲಕ್ಕಾಗಿ ತಿಂದ ಯಾವುದೇ ಆಹಾರ ಅದು ಶಾಖಾಹಾರವಾಗಲೀ, ಮಾಂಸಾಹಾರವಾಗಲೀ ರೋಗವನ್ನು ಉತ್ಪತ್ತಿ ಮಾಡುತ್ತದೆ, ಎಂಬುದೇ ಆಯುರ್ವೇದ ಸೂತ್ರ. ಇದರರ್ಥ ಮಾಂಸಾಹಾರಿಗಳಾಗಿ ಎಂದಲ್ಲ ಮಾಂಸಾಹಾರ ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಪ್ರವೃತ್ತಿ ಬೇಡ. ಶಾಕಾಹಾರಿಗಳು ಮಾಂಸಾಹಾರಿಗಳಾಗಲು ಅವಕಾಶ ಇಲ್ಲ, ಅದೇ ರೀತಿ ಮಾಂಸಾಹಾರಿಗಳಿಗೆ ಒಂದೇ ಸಲ ಮಾಂಸಾಹಾರವನ್ನು ಬಿಡಲು ಅವಕಾಶ ಇಲ್ಲ, ಕ್ರಮವರಿತು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಬಿಡಬಹುದು.
     ಕಾಲದಲ್ಲಿ ಆಹಾರ ಸೇವನೆ - ಎಂದರೆ ದಿನಾ ಒಂದೇ ಸಮಯದಲ್ಲಿ ಆಹಾರ ಸೇವಿಸುವುದು ಮಾತ್ರಾ ಎಂದಲ್ಲ. ದೇಹದ ಪ್ರತೀ ಕ್ರಿಯೆಯೂ ಸೂರ್ಯನ ಗತಿಯನ್ನು ಅನುಸರಿಸಿ ನಡೆಯುತ್ತದೆ. ಹಾಗಾಗಿ ನಮ್ಮ ದೈನಂದಿನ ಜೀವನವೂ ಸೂರ್ಯೋದಯ ಸೂರ್ಯಾಸ್ತಗಳನ್ನು ಅನುಸರಿಸಿ ನಡೆದಲ್ಲಿ (ಸಾಧ್ಯತೆ ಇರುವವರಿಗೆ) ವ್ಯಾಧಿ ಬಾರದು.
ಸಕಾಲದಲ್ಲಿ ಆಹಾರ ಇಲ್ಲದೆ ಯಾವ ವ್ಯಾಧಿಯೂ ಸಂಪೂರ್ಣವಾಗಿ ಗುಣ ಆಗದು.
ವ್ಯಾಯಾಮ- ಮನೆ ಹೊರಗೆ ದುಡಿಯುವವರಿಗೆ ಮನೆ ಒಳಗೆ ಮಾಡುವ ವ್ಯಾಯಾಮಗಳೂ, ಮನೆಯಲ್ಲೇ ಇರುವವರಿಗೆ ವಾಕಿಂಗ್ ಇತ್ಯಾದಿ ವ್ಯಾಯಾಮಗಳೂ ಹಿತಕರ. ಹೊರಗೆ ದುಡಿಯುವವರಿಗೆ ಯೋಗ ಧ್ಯಾನ ಇತ್ಯಾದಿಗಳು ಹಿತಕರ.
ಎಷ್ಟು ವ್ಯಾಯಾಮ - ಆರೋಗ್ಯ ರಕ್ಷಣೆಗೆ ಮಾಡುವ ವ್ಯಾಯಾಮದಲ್ಲಿ ಜೋರಾಗಿ ಉಸಿರು (ಮೇಲುಸಿರು) ಪ್ರಾರಂಭವಾಗುವವರೆಗೆ ಮಾಡಬೇಕು. ಇದಕ್ಕಿಂತ ಹೆಚ್ಚು ವ್ಯಾಯಾಮ ಆನಾರೋಗ್ಯಕ್ಕೆ ಕಾರಣವಾಗುತ್ತದೆ.
ವಿಶಿಷ್ಟ ಜೀವನ ಶೈಲಿಯ ಆಹಾರಗಳು- ಅತಿ ಶೀತ ಪ್ರದೇಶಗಳಾದ ದ್ರುವ ಪ್ರದೇಶಗಳಲ್ಲಿ, ನಿತ್ಯ ಮಳೆಬರುವ ಭೂಮಧ್ಯರೇಖೆಯಲ್ಲಿ ಈ ಋತುಚರ್ಯೆಗಳನ್ನು ಅನುಸರಿಸ ಬಾರದು, ಅಲ್ಲಿಗೆ ವಿಶಿಷ್ಟ ಆಹಾರ ವಿಧಾನಗಳಿವೆ. ಹಾಗು ಅವನ್ನು ಅಗತ್ಯ ಇದ್ದವರು ತಿಳಿದುಕೊಂಡಿರ ಬೇಕು. ಸಾಮಾನ್ಯ ಋತುಚರ್ಯೆಗಳು ಸಾಮಾನ್ಯವಾಗಿ ಜನಸಾಮಾನ್ಯರಿಗೆ, ವಿಶಿಷ್ಟ ಜೀವನ ನಡೆಸುವವರಿಗೆ ಪುನಃ ಋತುಚರ್ಯೆ ಮತ್ತು ಆಹಾರ ಬೇರೆಯಾಗಿರುತ್ತದೆ.
ಉಪವಾಸ-ಎಲ್ಲಾ ದೇಶಗಳಲ್ಲೂ ಹೊಸ ಸಂಸ್ಕೃತಿಗಳನ್ನು ಹೊರತುಪಡಿಸಿ (ಕಮ್ಮ್ಯುನಿಷ್ಟ್ ಚೀನಾ, ಆಸ್ಟ್ರೇಲಿಯಾ, ಅಮೇರಿಕಾ ಇತ್ಯಾದಿ) ಉಳಿದ ಮುಸ್ಲಿಂ, ಕ್ರಿಸ್ತ ಜನಾಂಗಗಳಲ್ಲಿ ಕೂಡ ವರ್ಷದಲ್ಲಿ ಸುಮಾರು ೧ ತಿಂಗಳು ಮಾಂಸಾಹಾರ ವರ್ಜ ಅಥವಾ ಉಪವಾಸದ ಕ್ರಮವಿದೆ. ಇದು ಮಾಂಸಾಹಾರದ ತೊಂದರೆಗಳನ್ನು ನಿವಾರಿಸುತ್ತದೆ.
ಸದಾ ಪಥ್ಯಗಳು - ಏಕದಳ ಧಾನ್ಯಗಳು, ನೆಲ್ಲಿಕಾಯಿ, ಅಳಲೇ ಕಾಯಿ, ಹೆಸರು ಬೇಳೆ, ಪಡವಲ ಸೊಪ್ಪು, ಎಳ್ಳಣ್ಣೆ ಜನ್ಮತಃ ಮಾಂಸಾಹಾರಿಗಳಿಗೆ ಆಡಿನಮಾಂಸ, ದ್ರಾಕ್ಷೆಯ ಮದ್ಯ (ಕ್ರಮವರಿತು) ಚಳಿಜಾಸ್ತಿ ಇರುವ ದೇಶಗಳಲ್ಲಿ ಸಾಸಿವೆ ಎಣ್ಣೆ, ಬಿಸಿಲು ಜಾಸ್ತಿ ಇದ್ದು ಬೆವರುವಲ್ಲಿ ಕೊಬ್ಬರಿ ಎಣ್ಣೆ, ಬೇರೆ ಕಡೆ ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆ ಸೇವನೆಗೆ ಮತ್ತು ಅಭ್ಯಂಗಕ್ಕೆ ಯೋಗ್ಯ. ಇದನ್ನು ಬಿಟ್ಟು ಉಳಿದ ಎಣ್ಣೆಗಳನ್ನು ಆಯಾಯ ದೇಶದ ಸಂಪ್ರದಾಯದಂತೆ ಬಳಸಬಹುದು.
ಸದಾ ಅಪಥ್ಯಗಳು - ಅರ್ಧ ಹೆಪ್ಪಾದ ಸಿಹಿಮೊಸರು, ಅತೀ ಶೀತವಾದ, ಅತೀ ಉಷ್ಣವಾದ, ಅತೀ ಅಮ್ಲವಾದ ಆಹಾರಪದಾರ್ಥಗಳು, ಹಸುವಿನ ಮಾಂಸ ಪದೇಪದೇ ಆಹಾರ ಸೇವಿಸುವುದನ್ನು ಸಂಪೂರ್ಣವಾಗಿ ಬಿಡಬೇಕು. ಒಟ್ಟಾರೆ ಹೇಳುವುದಾದರೆ ಸ್ವಾಸ್ಥ್ಯಪೂರ್ಣ ಜೀವನ ಎನ್ನುವುದು ದೇಶ, ಕಾಲ, ಸಂಪ್ರದಾಯ, ಆಚಾರ ವಿಚಾರಗಳ ಸಮಷ್ಟಿಯಲ್ಲಿದೆ. ಆಯಾಯ ದೇಶ, ಕಾಲ, ಕುಲ ವೃತ್ತಿಯನ್ನು ಗಮನಿಸಿ ಅನುಸರಿಸಿದಾಗ ಯಾವುದೂ ಮೂಢನಂಬಿಕೆಯಾಗುವುದಿಲ್ಲ. ಕೇವಲ ಹಣವನ್ನು ಕೊಟ್ಟು ಔಷಧ ತೆಗೆದುಕೊಂಡ ಮಾತ್ರಕ್ಕೆ ಆರೋಗ್ಯ ಪ್ರಾಪ್ತಿಯಾಗುವುದೂ ಇಲ್ಲ.
ಇಲ್ಲಿ ಕೆಲವು ಸಂಪ್ರದಾಯಗಳನ್ನು ಉದಾಹರಣ ರೂಪದಲ್ಲಿ ವಿಶ್ಲೇಷಿಸಲಾಗಿದೆ. ಇದೇ ಹಾದಿಯಲ್ಲಿ ಜೀವನ ಶೈಲಿಯನ್ನು ವಿವೇಚನಾ ಪೂರ್ವಕವಾಗಿ ಅಳವಡಿಸಿಕೊಂಡರೆ  "ಸರ್ವೇ ಸಂತು ನಿರಾಮಯಾಃ, ಸರ್ವೇ ಭದ್ರಾಣಿ ಪಶ್ಯಂತು , ಮಾ ಕಶ್ಚಿತ್ ದುಃಖ ಭಾಗ್ಭವೇತ್ " ಪ್ರಪಂಚದಲ್ಲಿ ಎಲ್ಲರೂ ರೋಗವಿಲ್ಲದವರಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ, ಯಾರಿಗೂ ಯಾವ ರೀತಿಯ ದುಃಖವೂ ಇಲ್ಲದಿರಲಿ ಎಂಬ ಮಾತು ಸತ್ಯವಾಗುತ್ತದೆ.