Ayurvediccommunity.com©
 

 ಕಾಲ ದೇಶ ಆಯುರ್ವೇದ ಮತ್ತು ಹಬ್ಬ -- ದೇಶ

    ಜೀವಿಸುವ ಪ್ರದೇಶಗಳನ್ನು ಆಯುರ್ವೇದ ಮೂರು ವಿಭಾಗಗಳಾಗಿ ವಿಂಗಡಿಸಿದೆ; ಅವು ಯಾವುವೆಂದರೆ - ಜಾಂಗಲ, ಆನೂಪ ಮತ್ತು ಸಾಧಾರಣ.
ಪ್ರಪಂಚದ ಯಾವುದೇ ಪ್ರದೇಶಗಳು ಈ ಮೂರು ವಿಭಾಗಗಳ ಲಕ್ಷಣ ಅಥವಾ ಅವುಗಳ ಸಂಮಿಶ್ರಣವಾಗಿರುತ್ತವೆ. ಇದರಿಂದ ಕಾಲಕ್ಕನುಗುಣವಾಗಿ ಈ ಮೂರು ಜಾಗ (ದೇಶ) ಗಳ ಜೀವನ ಶೈಲಿಯನ್ನು ಅಳವಡಿಸಿ ಕೊಂಡು ವ್ಯಾಧಿಗಳನ್ನು ತಡೆಯಬಹುದು. ಅಂದರೆ ಯಾವುದೇ ಜೀವನ ಶೈಲಿಯ ಅಳವಡಿಕೆಗೆ ಅಗತ್ಯವಾದ ಅಂಶಗಳು ಎಂದರೆ ದೇಶ, ಕಾಲ.

ಜಾಂಗಲ ದೇಶ- ಎತ್ತರ ತಗ್ಗು ಪ್ರದೇಶಗಳಿಲ್ಲದೆ, ಬಯಲಾದ ಭೂಮಿ, ಒರಟಾದ ಮಣ್ಣು, ಮರಳಿರುವ, ಮುಳ್ಳಿರುವ ಗಿಡ ಮರಗಳಿಂದ ಕೂಡಿದ ಪ್ರದೇಶ, ಸಹಜವಾದ ನೀರಿನ ತೊರೆ ಝರಿಗಳಿಲ್ಲದ, ಬಿಸಿ ಗಾಳಿ ಇರುವ, ಮಳೆಗಳಿಲ್ಲದ ಪ್ರದೇಶ.
ಅನುಸರಿಸಬೇಕಾದ ಋತುಚರ್ಯೆ:- ಇಲ್ಲಿ ವಸಂತ, ಗ್ರೀಷ್ಮ ಚರ್ಯೆಗಳನ್ನೇ ಜಾಸ್ತಿಯಾಗಿ ಆಚರಿಸ ಬೇಕು; ಇಲ್ಲವಾದರೆ ವಾಂತಿ, ಬೇದಿ, ಜ್ವರ, ಬಿಸಿಲಿನಿಂದ ಬರುವ ತಲೆ ನೋವು, ಮೂಲವ್ಯಾಧಿ, ಗರ್ಭಕೋಶದ ವ್ಯಾಧಿಗಳು, ಉರಿ ಸಹಿತವಾದ ವ್ಯಾಧಿಗಳು, ಶರೀರದ ವಿವಿಧ ಭಾಗಗಳಲ್ಲಿ ಉರಿ, ಕೆಮ್ಮು, ನೆಗಡಿ ಮುಂತಾದ ರೋಗಗಳು ಬರುವ ಸಾಧ್ಯತೆಗಳಿವೆ.
ಪಧ್ಯಗಳು- ಸಿಹಿಯಾದ ಮತ್ತು ಹಾಲಿನಿಂದ ತಯಾರಿಸಿದ ಆಹಾರ, ತುಪ್ಪ ಬೆಣ್ಣೆ, ಮಜ್ಜಿಗೆ , ಸಂಸ್ಕಾರಿತ ಮೊಸರು ಉಪಯೋಗಿಸ ಬೇಕು. ಇದರೊಟ್ಟಿಗೆ ವಾರಕ್ಕೊಮ್ಮೆ ಮಲಶೊಧನೆ ಅಗತ್ಯ.
ಅಪಥ್ಯಗಳು--ಮಸಾಲೆ ಪದಾರ್ಥಗಳು, ಖಾರವೇ ಪ್ರಧಾನವಾಗಿರುವ ಆಹಾರಗಳು, ಪಿತ್ತ ಹೆಚ್ಚಾಗಿಸುವ ಆಹಾರ, ತರಕಾರಿಗಳು. ಅತಿ ಶ್ರಮ, ಅತಿ ತಿರುಗಾಟ, ವಿಪರೀತ ವ್ಯಾಯಾಮ.
ಆನೂಪ ದೇಶ:- ನೀರಿನ ಸೆಲೆಗಳು ಹೆಚ್ಚಿದ್ದು ಬೆಟ್ಟ ಗುಡ್ಡಗಳಿದ್ದು, ನದಿಗಳಿದ್ದು, ಸಮುದ್ರ ತೀರವಾಗಿದ್ದು, ಮಳೆ ಇದ್ದು ತಂಪಾದ ಹಿತವಾದ ಗಾಳಿ ಇರುವ ದೇಶ ಆನೂಪ. ಇಲ್ಲಿ ಬಿಸಿಲು ಕಡಿಮೆ ಇದ್ದು ಸಹಜವಾಗಿಯೇ ಚಳಿ ಮಳೆ ಜಾಸ್ತಿ.
ಆಚರಿಸಬೇಕಾದ ಋತುಚರ್ಯೆ: ವರ್ಷ, ಶರತ್,ಹೇಮಂತ, ಶಿಶಿರ ಋತುಗಳ ಚರ್ಯೆಗೆ ಪ್ರಾಧಾನ್ಯತೆ.
ರೋಗಗಳ ಸ್ವರೂಪ : ಇಲ್ಲಿ ಸಾಮಾನ್ಯವಾಗಿ ಕಫ, ಕಫ ವಾತ ಸಂಬಂಧವಾದ ವ್ಯಾಧಿಗಳು ಜಾಸ್ತಿ.
ಅಪಥ್ಯಗಳು - ತಂಗಳು, ಶೀತಲೀಕರಿಸಿದ್ದು, ಹಿಂದಿನ ದಿನದ ಆಹಾರಗಳನ್ನು ಬಿಡಬೇಕು.
ಪಥ್ಯಗಳು - ಅಭ್ಯಂಗ, ಅವಗಾಹ, ಬಿಸಿ ಆಹಾರ ಸೇವನೆ, ಜೀರ್ಣಕ್ರಿಯೆಗೆ ಪೂರಕವಾಗುವ ದ್ರವಪದಾರ್ಥಗಳು. . ಇಂತಹ ಪ್ರದೇಶಕ್ಕೆ ವಲಸೆ ಹೋದವರು ಈ ನಿಯಮ ಪಾಲಿಸದೆ ಈ ಖಾಯಿಲೆಗಳು ಬಂದರೆ ಗುಣ ಪಡಿಸುವುದು ಕಷ್ಟ.
ಸಾಧಾರಣ ದೇಶ - ಹಿಂದಿನ ಎರಡೂ ಪ್ರದೇಶಗಳ ಲಕ್ಷಣಗಳಿದ್ದು, ಮಧ್ಯಮ ರೀತಿಯ ಹವಾಮಾನ ಹೊಂದಿರುವ ದೇಶ. ಅಂದರೆ ವಿಪರೀತ ಮಳೆ, ಬಿಸಿಲು, ನೀರು, ಬೆಟ್ಟ, ದಟ್ಟಕಾಡು ಇಲ್ಲದೆ ಎಲ್ಲವೂ ಸ್ವಲ್ಪ ಪ್ರಮಾಣದಲ್ಲಿ ಇರುವ ದೇಶ.
ಅನುಸರಿಸಬೇಕಾದ ಋತುಚರ್ಯೆ:- ಇಲ್ಲಿ ಸಾಮಾನ್ಯವಾಗಿ ಆರು ಋತುಗಳು ಕಾಣುತ್ತವೆ.
ಪಥ್ಯ:- ಇಲ್ಲಿ ಕಾಲ ಬದಲಾದಂತೆ ದಿನಚರಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡ ಬೇಕು. ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಏಳುವುದು, ನಿತ್ಯ ಅಭ್ಯಂಗ, ವ್ಯಾಯಾಮ, ಹಿತವಾಗಿ ಬಿಸಿ ಆಹಾರ, ಅತೀ ಗಡಿಬಿಡಿ ಇಲ್ಲದ ಜೀವನ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ.
ಅಪಥ್ಯ:- ಋತುಚರ್ಯೆಯನ್ನು ಅನುಸರಿಸದೇ ಇರುವುದು.
ರೋಗದ ಸ್ವರೂಪ :- ಇಲ್ಲಿ ಯಾವುದೇ ವ್ಯಾಧಿ ಬರುವುದು ಕಡಿಮೆ;ಬಂದರೆ ಗುಣವಾಗುವುದು ನಿಧಾನ.

ಕಾಲ ಚರ್ಯೆ - ಋತುಚರ್ಯೆ
(ಭಾರತದ ವಾಯು ಗುಣಕ್ಕೆ ಅನುಗುಣವಾಗಿ ನರ್ಮದಾ ನದಿಯ ಉತ್ತರಕ್ಕೆ ಪ್ರಾವೃಟ್, ವರ್ಷಾ, ಶರತ್, ಶಿಶಿರ, ವಸಂತ, ಗ್ರೀಷ್ಮಗಳೆಂದು ಆರು ಋತುಗಳು. ಅದೇ ದಕ್ಷಿಣಕ್ಕೆ ವರ್ಷಾ, ಶರತ್, ಹೇಮಂತ, ಶಿಶಿರ, ವಸಂತ, ಗ್ರೀಷ್ಮಗಳೆಂದು ಆರು ಋತುಗಳು. )

ಜೀವನ ಶೈಲಿಯ ಅಗತ್ಯತೆ ಹಾಗು ಪ್ರಾಮುಖ್ಯತೆ (ದೇಶ ಕಾಲಕ್ಕನುಸಾರ) ಕಾಲಾಚಾರ - ಋತುಚರ್ಯೆ-ಸಾಮಾನ್ಯ ನಿಯಮಗಳು
ಪ್ರತೀದೇಶದಲ್ಲೂ ಆಯಾಕಾಲದ ಲಕ್ಷಣಾನುಸಾರ ಋತು ಲಕ್ಷಣ ಜಾಸ್ತಿ ಇದ್ದರೆ, ಆಯಾ ಋತು ಚರ್ಯೆಯನ್ನು ಜಾಸ್ತಿಯೂ, ಕಡಿಮೆ ಇದ್ದರೆ ಕಡಿಮೆಯೂ ಮಾಡಬೇಕು.
೨ ಆಯಾ ದೇಶದಲ್ಲಿ
ಸಹಜವಾಗಿ ಬೆಳೆಯುವ ಆಹಾರಗಳನ್ನು ಉಪಯೋಗಿಸ ಬೇಕು.. ಬೇರೆ ಪ್ರದೇಶದಲ್ಲಿ ಬೆಳೆಯುವ ಆಹಾರಗಳು ಆ ಕಾಲದಲ್ಲಿ ಆಯಾ ದೇಶದಲ್ಲಿ ಸಿಗದೆ / ಬೆಳೆಯದೆ ಇದ್ದರೆ ಉಪಯೋಗಿಸ ಬಾರದು.
೩ ಆಯಾ ದೇಶದಲ್ಲಿ ಸಹಜವಾಗಿ ಹಾಳಾಗದೇ ಉಳಿಯುವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಬೇಕು. ಉಳಿಯದಿರುವ ಆಹಾರಗಳನ್ನು ಉಪಯೋಗಿಸ ಬಾರದು
೪ ಸಹಜವಾಗಿಯೇ ಹೆಚ್ಚು ದಿನ ಉಳಿಯುವ ಪದಾರ್ಥಗಳು, ವಸ್ತುಗಳು, ಆಹಾರಗಳು ಆರೋಗ್ಯಕ್ಕೆ ಹೆಚ್ಚು ಅನುಕೂಲ / ಸಹಜವಾಗಿ ಬೇಗ ಹಾಳಾಗುವ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಹೆಚ್ಚು ಅನುಕೂಲವಲ್ಲ.
೫ ಆರೋಗ್ಯವಾಗಿರುವ ಶಾಕಾಹಾರಿಗಳಿಗೆ ಏಕದಳ, ದ್ವಿದಳ, ತರಕಾರಿ, ಹಣ್ಣು ಇವು ಒಂದಕ್ಕಿಂತ ಒಂದು ಕಡಿಮೆ ಪ್ರಮಾಣದಲ್ಲಿರಬೇಕು . ಆಹಾರದಲ್ಲಿ ಹಸಿ ಜಿಡ್ಡು (ಹಸಿತುಪ್ಪ/ ಹಸಿ ಎಣ್ಣೆ) ಇರಲೇ ಬೇಕು.
ಮೊಸರು ಶಾರೀರಿಕ ಶ್ರಮ ಇಲ್ಲದಿರುವವರಿಗೆ ಹಾನಿಕಾರಕ.
೬.ಮಾವು, ಪಪ್ಪಾಯಿ, ಅನನಾಸು ಈ ರೀತಿಯ ಜೀರ್ಣ ಶಕ್ತಿ ವರ್ಧಕ ಆಹಾರವು ಊಟದ ನಂತರ ಕೆಲವು ಋತುಗಳಲ್ಲಿ ಒಳ್ಳೆಯದು,
ಊಟದ ನಂತರ ಹಣ್ಣು ಶಾಕಾಹಾರಿಗಳಿಗೆ ಅತೀ ರೋಗಕಾರಕ.
೭.ಮಾಂಸಾಹಾರಿಗಳು ಆಹಾರದ ಜೊತೆಗೆ ಸೊಪ್ಪಿನ ಅಂಶ, ನಾರಿನ ಅಂಶ ಜಾಸ್ತಿ ಇರುವ ಆಹಾರ ತೆಗೆದುಕೊಳ್ಳಬೇಕು. ಮಾಂಸದ ಊಟದ ನಂತರ ಹಣ್ಣು ತಿನ್ನ ಬೇಕು, ಮಾಂಸಾಹಾರದೊಂದಿಗೆ ಹಾಲು, ಹಾಲಿನಿಂದ ಮಾಡಿದ ಪದಾರ್ಧಗಳು ಸಂಪೂರ್ಣ ವರ್ಜ್ಯ.
೮. ಶಾಕಾಹಾರಿಗಳು ಒಂದೇ ತರಕಾರಿಯನ್ನು ನಿತ್ಯ ಅಡುಗೆಯಲ್ಲಿ ಬಳಸಬಾರದು, ಬದಲಾಯಿಸಲೇ ಬೇಕು.
೯. ಹಾಲು ಉಪಯೋಗಿಸುವವರು ಬೆಳ್ಳುಳ್ಳಿಯನ್ನು(ಉಪಯೋಗಿಸಲೇ ಬೇಕಾದಾಗ) ಹುರಿದೇ ಉಪಯೋಗಿಸ ಬೇಕು
೧೦. ಮನೆಯಲ್ಲಿ (ಕೆಲಸಕ್ಕೆ ಹೋಗದವರು)ಇರುವವರು ಸೂರ್ಯೋದಯವಾಗಿ ಎರಡರಿಂದ ಮೂರು ಗಂಟೆ ಒಳಗೆ ಬೆಳಗಿನ ಆಹಾರ ಸೇವಿಸಲೇಬೇಕು. ಹಾಗೆಯೇ ರಾತ್ರೆ ಆಹಾರದ ಸೇವನೆ ಬೆಳಗಿನ ಆಹಾರ ಸೇವನೆಯಾಗಿ ೧೧ ಗಂಟೆಗಳೊಳಗೆ ಆಗಲೇಬೇಕು.(ಅಂದರೆ ಸೂರ್ಯೋದಯ ೬ಗಂಟೆಗಾದರೆ ೯ಗಂಟೆ ಒಳಗೆ ಬೆಳಗ್ಗೆ ಆಹಾರ ಸೇವನೆ ರಾತ್ರೆ ೮ ಗಂಟೆ ಒಳಗೆ ರಾತ್ರೆ ಆಹಾರ ಸೇವನೆ)
ನೆನಪಿಡಿ - ಪ್ರಪಂಚದಲ್ಲಿ ಶೇಕಡಾ ೮೨ ಜನ ಮಾಂಸಾಹಾರಿಗಳು, ಅವರ ಬಗ್ಗೆ ನಡೆದ ರಿಸರ್ಚ್ ಉಳಿದ ೧೮ ಶೇಕಡಾ ಶಾಕಾಹಾರಿಗಳಿಗೆ ಅನ್ವಯಿಸುವುದಿಲ್ಲ. ಅವರ ಬಗ್ಗೆ ಅಂಕಿ-ಅಂಶಗಳನ್ನು ಕಲೆ ಹಾಕುವುದೂ ಇಲ್ಲ.
ಮುಂದೆ