Ayurvediccommunity.com©
 

ಕಾಲ ವಿವರಣೆ  :-
ಕಾಲವೆಂದರೆ `
ಕಲಯತಿ ಸಂಕಲಯತಿ ಇತಿ' ಯಾವುದು ವಿಷಯ, ವ್ಯಕ್ತಿ, ವಸ್ತುಗಳನ್ನು ಬೆಸೆಯುವುದೋ ಅದು ಕಾಲ. ಅದನ್ನು ಅನೇಕ ರೀತಿಯಿಂದ ಅರ್ಥೈಸ ಬಹುದು. ಇಲ್ಲಿ ಪ್ರಸ್ತುತ ಕಾಲ ಲಕ್ಷಣವೆಂದರೆ ಸೂರ್ಯ ಚಂದ್ರ ಭೂಮಿ ಇವುಗಳ ನಡುವಿನ ಸಂಬಂಧದಿಂದಾಗಿ ಭೂಮಿಯಲ್ಲಾಗುವ ಬದಲಾವಣೆ, ಅದರಿಂದ ಗಿಡ ಮರ ಬಳ್ಳಿ, ಬೇರೆ ಜೀವಿಗಳಲ್ಲಾಗುವ ಬದಲಾವಣೆಯನ್ನು, ಆ ಬದಲಾವಣೆಗಳ ಪರಿಣಾಮವನ್ನೂ, ಬದಲಾವಣೆಗಳಿಂದ ತೊಂದರೆ ಆಗದ ಹಾಗೆ ಮಾಡ ಬೇಕಾದ ಕಾರ್ಯಕ್ರಮಗಳನ್ನೂ ವಿವರಿಸುತ್ತೇವೆ.
ಕಾಲ ವಿಭಾಗ ಹಾಗು ಕಾಲ ವಿಭಾಗ ವರ್ಣನೆ : -
ಕಾಲ ವಿಭಾಗವನ್ನು ತಿಳಿಯ ಬೇಕಾದ ಕಾರಣ:- ಕಾಲವೇ ಎಲ್ಲಾ ಜೀವಿಗಳ ಶರೀರ ಕ್ರಿಯೆಗಳ ನಿಯಂತ್ರಕ. ಪ್ರತಿ ಜೀವಿಯ ಶರೀರ, ಮನಸ್ಸುಗಳು ತಮ್ಮ ಬಲಕ್ಕನುಸಾರ ಕಾಲ ಪ್ರಚೋದಿತವಾಗಿ ಕಾರ್ಯ ಪ್ರವೃತ್ತವಾಗುತ್ತವೆ. ತಮ್ಮ ಕಾರ್ಯವನ್ನು ಸರಿಯಾಗಿ ಮಾಡಲು ಬೇಕಾದ ಅಗತ್ಯ ವಸ್ತುಗಳನ್ನು ತಾವಾಗಿಯೇ ಸಂಪಾದಿಸುವುದನ್ನು ಮನುಷ್ಯನ್ನು ಹೊರತುಪಡಿಸಿ ಉಳಿದ ಜೀವಿಗಳು ಮಾಡುತ್ತವೆ; ಅಥವಾ ಕಾರ್ಯಪ್ರವೃತ್ತವೇ ಆಗುವುದಿಲ್ಲ. ಉದಾ:- ಇರುವೆ ಇಲಿಗಳು ಬೇಸಗೆಯಲ್ಲೇ ಮಳೇಗಾಲದಲ್ಲಿ ತಮಗೆ ಬೇಕಾಗುವ ಆಹಾರವನ್ನು ಸಂಗ್ರಹಿಸಿಕೊಳ್ಳುತ್ತವೆ. ಮನುಷ್ಯನಿಗೂ ಕಾಲಕ್ಕನುಗುಣವಾದ ಆಹಾರ, ವಿಹಾರದ ಅಗತ್ಯತೆಯನ್ನು ತಿಳಿದು ಅಯುರ್ವೇದದಲ್ಲಿ ಋತುಚರ್ಯೆಯನ್ನು ಹೇಳಿದ್ದಾರೆ. ಋತು ಚರ್ಯೆಯನ್ನು ಅನುಸರಿಸಿಲು ಋತು ತಿಳಿದಿರ ಬೇಕು; ಅದಕ್ಕಾಗಿ ಕಾಲ ವಿಭಾಗ ಮತ್ತು ಕಾಲ ಲಕ್ಷಣ ಜ್ಞಾನ ಅಗತ್ಯ.
೧ ವರ್ಷವನ್ನು ಸೂರ್ಯನ ಚಲನೆಗೆ ಅನುಗುಣವಾಗಿ ಉತ್ತರಾಯಣ ದಕ್ಷಿಣಾಯನವೆಂದು ಎರಡು ವಿಭಾಗಮಾಡಿದ್ದಾರೆ. ಸೂರ್ಯನು ದಕ್ಷಿಣಕ್ಕೆ ಚಲಿಸಿದಂತೆ ತೋರುವಾಗ (ಜೂನ್ ೨೧ರಿಂದ ಡಿಸೆಂಬರ್ ೨೧ರವರೆಗೆ) ದಕ್ಷಿಣಾಯನ, ಉಳಿದಕಾಲ ಉತ್ತರಾಯಣ. ಎಂದರೆ ೬ ತಿಂಗಳಿಗೆ ಒಂದು ಅಯನ. (ಇದು  ಆಯುರ್ವೇದದಲ್ಲಿ ಹೇಳಿರುವ ವಿಭಾಗ - ಪಂಚಾಂಗದ ವಿಭಾಗ ಅಲ್ಲ)
ಸೂರ್ಯನ ಚಲನೆಯಿಂದಾಗುವ ಅಯನವನ್ನು ಚಂದ್ರನ ಚಲನೆಗೆ ಅನುಗುಣವಾಗಿ 2 ತಿಂಗಳ 3 ಋತುಗಳಾಗಿ ವಿಭಾಗಿಸಿದ್ದಾರೆ. ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ವಾತಾವರಣದಲ್ಲಿ ಬದಲಾವಣೆ ಕಾಣುತ್ತದೆ, ಹಾಗು ಈ ಎರಡು ತಿಂಗಳ ಸಮೂಹವನ್ನು ಋತು ಎಂದು ಕರೆದಿದ್ದಾರೆ.
ಋತುಗಳು - ಆರು ಉತ್ತರಾಯಣದ
ಶಿಶಿರ , ವಸಂತ, ಗ್ರೀಷ್ಮ; ದಕ್ಷಿಣಾಯನದ ವರ್ಷ, ಶರತ್, ಹೇಮಂತ.
ಆರು ಋತುಗಳನ್ನು ಚಂದ್ರನ ಚಲನೆಯನ್ನು ಅನುಸರಿಸಿ ೧೨ ಮಾಸಗಳಾಗಿ ವಿಭಾಗಿಸಲಾಗಿದೆ. ಚೈತ್ರ, ವೈಶಾಖ -ವಸಂತ; ಜೇಷ್ಠ, ಆಷಾಡ- ಗ್ರೀಷ್ಮ; ಶ್ರಾವಣ ಭಾದ್ರಪದ -ವರ್ಷ; ಅಶ್ವಯುಜ, ಕಾರ್ತೀಕ -ಶರತ್; ಮಾರ್ಗಶಿರ ಪುಷ್ಯ- ಹೇಮಂತ; ಮಾಘ, ಪಾಲ್ಗುಣ - ಶಿಶಿರ. ಹಾಗೂ ಪ್ರತಿ ತಿಂಗಳನ್ನೂ ಚಂದ್ರನ ಕಕ್ಷೆಯನ್ನು ಅನುಸರಿಸಿ ೧೫ ದಿನಗಳ ೨ ಪಕ್ಷಗಳಾಗಿಯೂ, ಪಕ್ಷವನ್ನು ಪಾಡ್ಯದಿಂದ ಅಮವಾಸ್ಯೆ ಅಥವಾ ಹುಣ್ಣಿಮೆಯವರೆಗೂ ೧೫ ದಿನಗಳಾಗಿ ವಿಭಾಗಿಸಿದ್ದಾರೆ.
ವಿಶೇಷತೆ:- ಈ ವಿಭಾಗವನ್ನು ತಿಳಿಯಲು ಕ್ಯಾಲೆಂಡರ್ನ ಅವಶ್ಯಕತೆಯಿಲ್ಲ, ವಿಶ್ವದ ಎಲ್ಲಾ ಕಡೆಯಲ್ಲೂ ಸೂರ್ಯ ಚಂದ್ರರ ಚಲನೆಯನ್ನು ಅನುಸರಿಸಿ ತಿಳಿಯ ಬಹುದಾದ ನಿಜವಾದ ವೈಜ್ಞಾನಿಕ ಕಾಲ ವಿಭಾಗ.

ಇದು ಕಾಲದ ಮಾತಾಯಿತು ದೇಶವೆಂದರೆ? (ವಾಸಿಸುವ ಪ್ರದೇಶ ಹಾಗು ಅದರಿಂದಾಗುವ ಪರಿಣಾಮಗಳು.)ಮುಂದೆ